ಆಂಡೀಸ್
ಈ ಬೃಹತ್ ಪರ್ವತವನ್ನು ಸ್ಟ್ಯಾನಿಷ್ ಭಾಷೆಯಲ್ಲಿ ಕಾರ್ಡಿಲ್ಲೆರಾ ಡಿ ಲಾಸ್ ಆಂಡೀಸ್ ಎಂದು ಕರೆಯುತ್ತಾರೆ. ಪನಾಮಾ ಜಲಸಂಧಿಯಿಂದ ಟೆರಾ ಡೆಲ್ ಪ್ಯೂಗೊವರೆಗೆ ದಕ್ಷಿಣ ಅಮೆರಿಕದ ಪಶ್ಚಿಮತೀರದಲ್ಲಿ ಸುಮಾರು 4,000 ಮೈ. ಹಬ್ಬಿದೆ. ಎತ್ತರದಲ್ಲಿ ಇದು ಹಿಮಾಲಯಕ್ಕೆ ಎರಡನೆಯದು. ಆಕಾಂಕಾಗ್ವ ಶಿಖರ (22,835') ಪಶ್ಚಿಮಾರ್ಧಗೋಳದಲ್ಲೇ ಅತಿ ದೊಡ್ಡ ಶಿಖರವೆನಿಸಿಕೊಂಡಿದ್ದು ಈಚಿನ ಶೋಧನೆಗಳಿಂದ ಆ ಕೀರ್ತಿ ಓಜೊಸ್ ಡಿ ಸಲ್ಯಾಡೊ ಶಿಖರಕ್ಕೆ ಸಂದಿದೆ. ಈ ಪರ್ವತದಲ್ಲಿ ಚಿಂಬೊರಾಸೊ, ಇಲ್ಲಾಂಪು, ಈಯೇಮಾನೀ ಮುಂತಾದ ಅಗ್ನಿ ಪರ್ವತಗಳಿವೆ. ಇವೆಲ್ಲವೂ ಸಮುದ್ರಮಟ್ಟದಿಂದ 20,000' ಎತ್ತರದಲ್ಲಿವೆ. ಪರ್ವತಶ್ರೇಣಿಗಳ ಮಧ್ಯೆ ಬೊಲಿವಿಯದಲ್ಲಿ ಆಲ್ಟಿಪ್ಲಾನೊ ಪ್ರಸ್ಥಭೂಮಿಯಿದೆ. ಪೆರು, ಈಕ್ವೆಡಾರ್ ಮತ್ತು ಕೊಲಂಬಿಯಗಳಲ್ಲಿ ಆಂಡೀಸ್‍ನ ಎರಡು ಮೂರು ಸಮಾನಾಂತರ ಶ್ರೇಣಿಗಳು ಆಳವಾದ ನದೀ ಕಣಿವೆಗಳಿಂದ ಪ್ರತ್ಯೇಕಿಸಲ್ಪಟ್ಟಿವೆ. ಈ ಪರ್ವತದ ಅಗಾಧವಾದ ಮೇಲ್ಮೈಲಕ್ಷಣದಿಂದ ಪೂರ್ವ-ಪಶ್ಚಿಮ ಪ್ರದೇಶಗಳ ಸಂಪರ್ಕ ಕಷ್ಟಕರವಾಗಿದೆ. ದಕ್ಷಿಣದಲ್ಲಿ ಮಾತ್ರ ಆರ್ಜಂಟೀನದಿಂದ ಚಿಲಿಗೆ ಪರ್ವತದ ಮುಖಾಂತರ ಒಂದು ರೈಲುಮಾರ್ಗ ಹಾದುಹೋಗುವುದು. 16ನೆಯ ಶತಮಾನದಲ್ಲಿ ಆಂಡೀಸ್ ಪರ್ವತದ ಖನಿಜ ಸಂಪತ್ತು ಸ್ಪೇನಿನವರನ್ನು ಆಕರ್ಷಿಸಿತು. ಇಂದು ಈ ಪರ್ವತಭಾಗದಿಂದ ತಾಮ್ರ, ಸೀಸ, ತವರ, ಪ್ಲಾಟಿನಂ ಮತ್ತು ಬೆಳ್ಳಿ ಅಧಿಕ ಪ್ರಮಾಣದಲ್ಲಿ ರಫ್ತಾಗುತ್ತವೆ. ಆಂಡೀಸ್ ಗಣರಾಜ್ಯಗಳಲ್ಲಿ ಸೀರಾಡಿವಾಸ್ಕೊ, ಪೊಟೋಸಿ, ಚುಕ್ವಿಕಾಮಟಾ ಗಣಿಗಳು ಮುಖ್ಯವಾದುವು. ಲಾಪಾಚ್ (12,000'), ಕ್ವಿಟೊ (9,400') ಮುಖ್ಯಪಟ್ಟಣಗಳು. ಟಿಟಕಾಕ ಸರೋವರ (12,500') ನೌಕಾಯಾನಕ್ಕೆ ಉಪಯುಕ್ತವಾಗಿದೆ. ಇಂತ ನಾಗರಿಕತೆಗೆ ಪ್ರಸಿದ್ಧಿ ಪಡೆದ ಪೆರುವಿನ ಆಂಡೀಸ್, ಆರ್ಜಂಟೀನ, ಚಿಲಿಗಳ ಆಂಡೀಸ್ ಪರ್ವತ ಪ್ರದೇಶದ ಸುಂದರ ಪ್ರಕೃತಿ ದೃಶ್ಯಗಳು ಅಧಿಕ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತವೆ.		
  
(ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ